ಶ್ರೀಕ್ಷೇತ್ರ ಪರಿಚಯ

ಆತ್ಮೀಯ ಭಗವದ್ಭಕ್ತರೇ,

ಭಾರತದ ಭವ್ಯ ಸಾಂಸ್ಕೃತಿಕ ಸನಾತನ ಪರಂಪರೆಯಲ್ಲಿ ದೇವಾಲಯಗಳು ಸಾಮಾಜಿಕ ಹಾಗೂ ಧಾರ್ಮಿಕ ಶೃದ್ಧಾ ಕೇಂದ್ರಗಳಾಗಿವೆ. ದೇವರನ್ನು ಅಗೋಚರ ಶಕ್ತಿ ಎಂದು ಕರೆದು, ಭಯ-ಭಕ್ತಿ-ಶೃದ್ಧಾಭಾವಗಳಿಂದ ಪೂಜಿಸುವ ಪರಂಪರೆಯು ನಮ್ಮದ್ದಾಗಿದೆ. ಧಾರ್ಮಿಕ ಶೃದ್ಧಾ ಕೇಂದ್ರಗಳಾಗಿರುವ ದೇವಾಲಯಗಳು ನಮಗೆ ನೆಮ್ಮದಿ ಹಾಗೂ ಸುಖ:-ಶಾಂತಿಯನ್ನು ದೊರಕಿಸಿಕೊಡುವ ಶಕ್ತಿ ಕೇಂದ್ರವೂ ಆಗಿರುತ್ತದೆ. ಕರಾವಳಿ ಜಿಲ್ಲೆಗಳ ಸಂಸ್ಕೃತಿ, ಸಂಪ್ರದಾಯ, ರೀತಿ-ರಿವಾಜುಗಳ ಅನ್ವಯ ತಾವು ನಂಬಿಕೊಂಡು ಬಂದಿರುವ ದೈವದೇವರುಗಳ ಶಕ್ತಿಯನ್ನು ನಾನಾ ರೂಪಗಳಲ್ಲಿ ಆರಾಧಿಸುವ ಪರಂಪರೆಯು ನಮ್ಮಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿರುತ್ತದೆ.
ಶ್ರೀ ದುರ್ಗೆ ಸಾಲಿಕೇರಿಯ ಅಮ್ಮ
ಭಾರತದ ಉದ್ದಗಲಕ್ಕೂ ಶಕ್ತಿ ಸ್ವರೂಪಿಣಿಯಾಗಿ, ಮಹಾಮಾಯೆಯಾಗಿ, ಮಹಿಷಾಸುರ ಮರ್ಧಿನಿಯಾಗಿ, ಜಗನ್ಮಾತೆಯಾಗಿ, ಜಗತ್ ರಕ್ಷಕಿಯಾಗಿ ಈ ಪುಣ್ಯ ಭೂಮಿಯ ಜನಮಾನಸದಲ್ಲಿ ದುರ್ಗೆ ಅಚ್ಚಳಿಯದಂತೆ ನೆಲೆ ನಿಂತಿದ್ದಾಳೆ. ದೇವಿ ಪುರಾಣದಲ್ಲಿ ಮಹಾಲಕ್ಷಿಯಮ್ಮ ಎಂದು ಆರಾಧಿಸಲ್ಪಡುವ ಈ ಮಹಾ ಶಕ್ತಿಯು ಸೃಷ್ಟಿ - ಸ್ಥಿತಿ - ಲಯಗಳಿಗೆ ಕಾರಣೀಭೂತಳಾಗಿರುವುದಲ್ಲದೆ, ಇವಳನ್ನು ಅಭಯಂಕರಿ, ಕ್ಷೇಮಕರಿ, ಶುಭಂಕರಿ, ಮುಂತಾದ ವಿವಿಧ ನಾಮಗಳಿಂದ ಪ್ರಾರ್ಥಿಸಿ, ಪೂಜಿಸಿಕೊಂಡು ಬರಲಾಗುತ್ತಿದೆ. ಶ್ರೀ ಕ್ಷೇತ್ರ ಸಾಲಿಕೇರಿಯಲ್ಲಿ ದುರ್ಗಾಂಬಿಕೆ ಪದ್ಮಾಸೀನಳಾಗಿ, ಅಭಯಹಸ್ತಗಳೊಂದಿಗೆ, ಅಮೃತರೂಪಿಣಿಯಾಗಿ, ಪ್ರತಿಮಾ ಲಕ್ಷಣಗಳೊಂದಿಗೆ ಕಂಗೊಳಿಸಿ, ಭಕ್ತವೃಂದಕ್ಕೆ ತನ್ನ ದಿವ್ಯ ಸಾನಿಧ್ಯದ ಕರುಣೆ ತೋರಿ, ಕೃಪಾಕಟಾಕ್ಷ ಬೀರುತ್ತಾ ಭಕ್ತ ಜನರನ್ನು ಅನುಗ್ರಹಿಸಿ ಪಾಲಿಸಿಕೊಂಡು ಬಂದಿರುತ್ತಾಳೆ. ಶ್ರೀಕ್ಷೇತ್ರದಲ್ಲಿ ನೆಲೆ ನಿಂತು ಕ್ಷೇತ್ರ ಪಾಲಕಿಯಾಗಿ ದಿವ್ಯಪ್ರಭೆ ಬೀರಿ, ಸಕಲೈಶ್ವರ್ಯಗಳನ್ನಿತ್ತು ಭಕ್ತಜನರಿಂದ “ಸಾಲಿಕೇರಿಯ ಅಮ್ಮ” – ಎಂದೇ ಅನುಗೃಹ ಸ್ಥಾನದಲ್ಲಿದ್ದು ಸರ್ವ ಭಕ್ತಜನ ವಂದಿತಳಾಗಿದ್ದಾಳೆ. ಕುಲದೇವತೆ ಶ್ರೀ ಬ್ರಹ್ಮಲಿಂಗ ವೀರಭದ್ರ ಸ್ವಾಮಿ
ಕುಲದೇವತೆ ಶ್ರೀ ಬ್ರಹ್ಮಲಿಂಗ ವೀರಭದ್ರ ಸ್ವಾಮಿ
ಶಾಕ್ತ ಪುರಾಣದ ಪ್ರಕಾರ ಶಿವನ ಜಟೆಯಿಂದ ಅವತರಿಸಿದ ವೀರಭದ್ರ, ಪರಶಿವನ ಉಗ್ರ ಸ್ವರೂಪಿ. ಪಿತೃವಾಕ್ಯ ಪರಿಪಾಲನೆ, ನಿಷ್ಠೆ, ವೀರತ್ವ, ಕ್ಷಮಾಭಾವ, ಮುಂತಾದ ವಿಶಿಷ್ಠತೆಗಳನ್ನು ಹೊಂದಿರುವ ಶ್ರೀ ವೀರಭದ್ರ ದೇವರು ಶೆಟ್ಟಿಗಾರ ಕುಲಸಂಜಾತರ ಕುಲದೇವತೆಯೂ ಆಗಿದ್ದಾರೆ. ನೇಕಾರಿಕೆಯನ್ನು ಕುಲವೃತ್ತಿಯನ್ನಾಗಿರಿಸಿಕೊಂಡು ಬಂದ ಶೆಟ್ಟಿಗಾರ ಸಮುದಾಯವು ತಮ್ಮ ಕಷ್ಟ ಸಂಕಷ್ಟಗಳನ್ನು ದೂರ ಮಾಡಿ, ತಮ್ಮ ಕೌಟುಂಬಿಕ ಬದುಕಿನಲ್ಲಿ ಸುಖ: ಸಮೃದ್ಧಿಯನ್ನು ಕರುಣಿಸಿ ಕಾಪಾಡಿಕೊಂಡು ಬಂದಿರುವ ಅವರ ನಂಬಿಕೆಗೆ, ಶೃದ್ಧೆಗೆ, ನೆಲೆಯಾಗಿ ಅನುಗೃಹ ಸ್ಥಾನದಲ್ಲಿದ್ದು ಭಕ್ತರನ್ನು ಹರಸಿ ಕಾಪಾಡುತ್ತಿದ್ದಾರೆ.
ಸಿರಿ ಕುಮಾರ ಚಾವಡಿ

ಶ್ರೀ ಕ್ಷೇತ್ರ ಸಾಲಿಕೇರಿಯ ಧಾರ್ಮಿಕ ಪೂಜಾರಾಧನೆಯ ಸಂಪ್ರದಾಯದಲ್ಲಿ ಸಿರಿ ದೈವಾರಾಧನಾ ರೀತ್ಯಾ ಪದ್ಧತಿಯ ಪರಂಪರೆಯನ್ನು ಅನುಸರಿಸಿಕೊಂಡು ಬಂದಿರುವುದು ಪ್ರಮುಖ ವಿಚಾರವಾಗಿದೆ. ದೈವಗಳು ತಮ್ಮ ಪವಾಡ ಸದೃಶ ಹಾಗೂ ಜನಕಲ್ಯಾಣ ಅನುಗೃಹ ಕಾರಣಗಳಿಂದಾಗಿ ನಂಬಿದ ಭಕ್ತಜನರ ನಂಬಿಕೆಯ ನೆಲಗಟ್ಟಿನಲ್ಲಿ ದೈವೀಕರಣಗೊಂಡು ಆರಾಧಿಸಲ್ಪಡುತ್ತಿವೆ. ಸಿರಿಕುಮಾರ ಚಾವಡಿಯ ದೈವಾರಾಧನೆಯು ಸಮುದಾಯದ ಸಾಂಘಿಕ ಬದುಕಿನ ರೂಪದಲ್ಲಿದೆ. ಇಲ್ಲಿ ಸಿರಿ ಕುಮಾರ, ಸಿರಿ ಸಪ್ತ ಮಾತೆಯರು, ಪಂಜುರ್ಲಿ, ಹಾಯ್ಗುಳಿ, ಬೊಬ್ಬರ್ಯ ಮುಂತಾಗಿ ಸ್ಥಾಪಿಸಲ್ಪಟ್ಟಿರುವ ದೈವಗಳ ಆರಾಧನೆಯು ಅನೂಚಾನವಾಗಿ ನಡೆದುಕೊಂಡು ಬಂದ ರೀತಿ ನೀತಿಗಳಡಿಯಲ್ಲಿದೆ. ಹಬ್ಬಹರಿದಿನಗಳಲ್ಲಿ ಇಲ್ಲಿನ ದೈವಗಳಿಗೆ ಮೊದಲ ಪೂಜೆ ಪುನಸ್ಕಾರಗಳು ಸಲ್ಲುತ್ತವೆ. ಶ್ರೀಕ್ಷೇತ್ರದ ಜಾತ್ರೆಯ ಧಾರ್ಮಿಕ ಸಂಪ್ರದಾಯ ಆಚಾರಣಾ ಪದ್ಧತಿಗಳು ದೈವಸ್ಥಾನದಿಂದಲೇ ಆರಂಭಗೊಳ್ಳುವ ವೈಶಿಷ್ಠತೆಯನ್ನು ಅನುಸರಿಸಿಕೊಂಡು ಮುನ್ನಡೆದಿದೆ. ವರ್ಷದಾದ್ಯಂತವೂ ವಿವಿಧ ದೈವಾರಾಧನಾ ಕ್ರಮಗಳು ಭಕ್ತಜನರ ಭಕ್ತಿಸೇವೆಗಳಿಂದ ಪರಿಪೂರ್ಣವಾಗಿ ನಡೆದುಕೊಂಡು ಬಂದಿರುತ್ತದೆ.

ಹಿಂದಿನ ವರ್ಷಗಳಲ್ಲಿ ಸಿರಿ ಕುಮಾರ ಚಾವಡಿಯಲ್ಲಿ ದೈವಗಳು ಪಾತ್ರಿಗಳ ಮುಖೇನ ಹೇಳುತ್ತಿದ್ದ ಅಭಯದ ಮಾತುಗಳು ಜನರಲ್ಲಿ ಭಕ್ತಿಭಾವಗಳನ್ನು ಉಂಟು ಮಾಡುವಂತಿದೆ. “ನನ್ನ ಭಕ್ತರನ್ನು, ಊರ ಸಮಸ್ತರನ್ನು ಬುದ್ಧಿ ನೀತಿ ಹೇಳಿ ಮಡಿಲಲ್ಲಿಟ್ಟು ಸಾಕುತ್ತೇವೆ, ಊರಿಗೆ ಮಾಯಕದ ಬೇಲಿಯಾಗಿ ಹೂವಿನ ತೋಟದಂತೆ ನೋಡಿಕೊಳ್ಳುತ್ತೇವೆ, ಸೂರ್ಯಚಂದ್ರರು ಇರುವವರೆಗೆ ಈ ಕಟ್ಟುಕಟ್ಟಳೆಗಳಿಗೆ ಅಳಿವು ಇಲ್ಲದ ಹಾಗೆ ನಡೆಸಿಕೊಂಡು ಬರುತ್ತೇವೆ”- ಎಂದು ಅಭಯ-ಅನುಗ್ರಹದ ನುಡಿಮುತ್ತುಗಳನ್ನು ನೀಡುವ ದೈವಗಳು - ಭಕ್ತರಿಗೆ ಸತ್ಯ-ಧರ್ಮವನ್ನು ಪಾಲಿಸುವಂತೆ ಎಚ್ಚರಿಸುತ್ತಾರೆ. “ಸತ್ಯದ ಮಣ್ಣು ಇದು, ಹತ್ತು ಸಮಸ್ತರು ನೀವು. ಸತ್ಯದ ಊರಿದು, ಸತ್ಯದ ದೈವಗಳು ನಾವು. ಸತ್ಯ ಅಲ್ಲದೆ ಅಸತ್ಯವನ್ನು ಗೆಲ್ಲಲು ನಾವು ಬಿಡುವುದಿಲ್ಲ. ಸತ್ಯ ಬಯಸಿದಂತೆ ನಡೆಯುತ್ತದೆ. ಸತ್ಯ ದೈವಗಳನ್ನು ನಂಬಿ, ನಂಬುವಂತಹ ಸ್ಥಿತಿ ನಿರ್ಮಾಣ ಮಾಡಿಕೊಡುತ್ತೇವೆ.”– ಎನ್ನುವ ದೈವಗಳ ನುಡಿನಡೆಗಳು ಸತ್ಯದ ಹಿರಿಮೆಯನ್ನು ಅನಾವರಣಗೊಳಿಸಿ ಎಚ್ಚರಿಸುವ ರೀತಿಯಲ್ಲಿರುತ್ತವೆ.

ಶ್ರೀಕ್ಷೇತ್ರ ಸಾಲಿಕೇರಿ

ಉಡುಪಿ ಜಿಲ್ಲೆಯ ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಶ್ರೀ ಕ್ಷೇತ್ರ ಸಾಲಿಕೇರಿಯೂ ಧಾರ್ಮಿಕ ಶಕ್ತಿಕೇಂದ್ರವಾಗಿ ಪರಿಗಣಿಸಲ್ಪಡುತ್ತದೆ. ಅನುಗ್ರಹ ಸಾನಿಧ್ಯವನ್ನಿತ್ತು ಭವ್ಯ ಧಾರ್ಮಿಕ ಪರಂಪರೆಯುಳ್ಳ ಈ ಸುಕ್ಷೇತ್ರವು ಸುಮಾರು ೭೦೦ ವರ್ಷಗಳಷ್ಟು ಸುದೀರ್ಘ ಇತಿಹಾಸವನ್ನು ಹೊಂದಿರುತ್ತದೆ. ಉಡುಪಿ ಜಿಲ್ಲೆಯ, ಆರು ಮಾಗಣೆ, ಏಳು ಗ್ರಾಮಗಳು ಹಾಗೂ ಸಾಲಿಕೇರಿಯ ಪಾರಂಪರಿಕ ಕುಟುಂಬಗಳು ಮತ್ತು ಕೂಡುಕಟ್ಟಿನ ಸಮುದಾಯದವರೊಂದಿಗೆ ಎಲ್ಲಾ ಸಮೂದಾಯಗಳ ಭಕ್ತಾದಿಗಳನ್ನೊಳಗೊಂಡ ಧಾರ್ಮಿಕ ವ್ಯಾಪ್ತಿಯನ್ನು ಹೊಂದಿದ ಗ್ರಾಮದೇವತೆಯಾಗಿ ಸಮಸ್ತ ಭಕ್ತ ಜನರಿಗೂ ಕ್ಷೇತ್ರ ಮಹಿಮೆಯ ಮೂಲಕ ಅಭಯಾಭಿವೃದ್ಧಿಗಳನ್ನು ಅನುಗ್ರಹಿಸಿಕೊಂಡು ಬಂದ ಶಕ್ತಿಸ್ಥಳವೆಂದು ಪ್ರಖ್ಯಾತಿ ಪಡೆದಿದೆ.

ಶ್ರೀಕ್ಷೇತ್ರ ಸಾಲಿಕೇರಿಯಲ್ಲಿ ಅತಿ ವಿಜೃಂಭಣೆಯಿಂದ ಜಾತ್ರಾದಿ ಉತ್ಸವ ಪೂಜೆ ಪುನಸ್ಕಾರಗಳನ್ನು ಸಾಂಗೋಪಾವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಶ್ರೀಕ್ಷೇತ್ರಕ್ಕೆ ಶ್ರೀ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ದಕ್ಷಿಣಾಮ್ನಾಯ, ಶೃಂಗೇರಿಯ ಶ್ರೀ ಶಾರದ ಪೀಠವು ಗುರುಪೀಠವಾಗಿದೆ. ಶ್ರೀ ಕ್ಷೇತ್ರದಲ್ಲಿ ಪ್ರತೀ ವರ್ಷ ಫೆಬ್ರವರಿ ತಿಂಗಳ ಮೂರನೇ ವಾರದಲ್ಲಿ ದೇವಸ್ಥಾನದ ಕೂಡುಕಟ್ಟಿನವರ ಹಾಗೂ ಗ್ರಾಮಸ್ಥರ ಸಹಕಾರದಿಂದ ಜಾತ್ರೆಯು ವಿಜೃಂಭಣೆಯಿಂದ ಜರಗುತ್ತದೆ. ಜಾತ್ರೆಯ ಪೂರ್ವಭಾವಿಯಾಗಿ, ಗಣಪತಿ ದೇವರಿಗೆ ರಂಗಪೂಜೆ ಗಣಹೋಮ, ಚಂಡಿಕಾಯಾಗ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಕುಮಾರ ಚಾವಡಿಯಿಂದ ಬಾಳು ಭಂಡಾರ ಪೂಜೆ ಹಾಗೂ ಹಸಿರುವಾಣಿ ಮೆರವಣಿಗೆ ದೇವಸ್ಥಾನಕ್ಕೆ ಬಂದು ವಿಜೃಂಭಣೆಯಿಂದ ಬಡಾಸಾಲಿಕೇರಿ (ಆದಿದೇವಸ್ಥಾನದ ಮೂಲನಾಗಬನ) ಯವರೆಗೆ ಮೆರವಣಿಗೆ ಹೋಗಿ ವಾಪಾಸು ಬರುವ ದೇವರ ಉತ್ಸವ ಹಾಗೂ ರಾತ್ರಿ ಗೆಂಡಸೇವೆ ಜರಗುತ್ತದೆ. ಮರುದಿನ ಢಕ್ಕೆಬಲಿ ದಿನವಿಡೀ ಅತ್ಯಂತ ವಿಜೃಂಭಣೆಯಿಂದ ಉತ್ಸವ ಹಾಗೂ ರಥೋತ್ಸವ ಜರಗುತ್ತದೆ ತದನಂತರ ಮಾರನೆ ದಿವಸ ಸಂಜೆ ಒಕುಳಿ, ದೇವರ ಕೆರೆಯಲ್ಲಿ ಅವಭೃತ ಸ್ನಾನ ಧ್ವಜ ಅವರೋಹಣ ರಾತ್ರಿ ಕಲ್ಲುಕುಟ್ಟಿಗನ ಕೋಲಸೇವೆ ನೆರವೇರುತ್ತದೆ. ಕೊನೆಯ ದಿವಸ ಕುಮಾರ ಚಾವಡಿಯಲ್ಲಿ ಪೂಜೆ ಪುನಸ್ಕಾರದೊಂದಿಗೆ ಮಹಾಪ್ರಸಾದ ವಿತರಣೆಯಾಗುತ್ತದೆ. ಶ್ರಾವಣ ಮಾಸದಲ್ಲಿ ಮಾಸಪೂರ್ತಿ ಸೋಣೆಯಾರತಿ ಮಹಾಪೂಜೆ, ನವರಾತ್ರಿ ಮಹೋತ್ಸವ ಸಮಯದಲ್ಲಿ ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಹಾಗೂ ನವರಾತ್ರಿ ಪೂಜೆಗಳು ನಡೆಯುತ್ತಿದ್ದು, ಲಲಿತ ಪಂಚಮಿಯಂದು ಚಂಡಿಕಾಯಾಗ ಹಾಗೂ ಪ್ರಸಾದ ವಿತರಣೆ ನಡೆಯುತ್ತದೆ. ವರ್ಷಕ್ಕೆ ಎರಡು ಮಾರಿ ಪೂಜೆ ಮತ್ತು ಕಾರ್ತಿಕ ಮಾಸದ ಡಿಸೆಂಬರ್ ತಿಂಗಳಲ್ಲಿ ಕಾರ್ತಿಕಪೂಜೆ ಮತ್ತು ಸಾರ್ವಜನಿಕ ಸತ್ಯನಾರಾಯಣ ಪೂಜೆಗಳು ಉಜ್ವಲ ಸಂಪ್ರದಾಯದ ಹಿನ್ನೆಲೆಯಲ್ಲಿ ಸುವ್ಯವಸ್ಥಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ.

ಈ ಪ್ರಸಿದ್ದ ದೇವಾಲಯವು ೨೦೦೭ನೇ ಏಪ್ರಿಲ್-ಮೇ ತಿಂಗಳಲ್ಲಿ ಆಗಮ ಶಾಸ್ತ್ರಾನ್ವಯ ಶ್ರೀಕ್ಷೇತ್ರವಾಗಿ ರೂಪುಗೊಂಡಿತು. ನೂತನ ಶಿಲಾ ದೇಗುಲ ಸಮರ್ಪಣೆ, ನವನಿರ್ಮಿತ ಶ್ರೀದೇವಿ, ಶ್ರೀಗಣಪತಿ ಮತ್ತು ಶ್ರೀ ವೀರಭದ್ರದೇವರ ಅಷ್ಠಬಂಧ ಪ್ರತಿಷ್ಟೆ ಏಕೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ, ಪ್ರಪ್ರಥಮವಾಗಿ, ಶ್ರೀ ಮನ್ಮಹಾ ರಥೋತ್ಸವವು ವೇದಮೂರ್ತಿ ಶ್ರೀ ಚಂದ್ರಶೇಖರ ಸೋಮಯಾಜಿ, ಕೋಟ ಇವರ ಶಾಸ್ತ್ರೊಕ್ತ ಅನುಸರಣೆಯಲ್ಲಿ ವಿಜ್ರಂಭಣೆಯಿಂದ ಜರಗಿರುತ್ತದೆ. ಇದೇ ಸಂದರ್ಭದಲ್ಲಿ ಶ್ರೀ ಗಣಪತಿ, ಶ್ರೀ ಅಮ್ಮನವರು ಹಾಗೂ ಶ್ರೀ ವೀರಭದ್ರ ದೇವರುಗಳ ಶಿಲಾಮಯ ಗರ್ಭಗೃಹಗಳು, ತೀರ್ಥಮಂಟಪ, ತೀರ್ಥಬಾವಿ, ಸುತ್ತುಪೌಳಿ ಹಾಗೂ ಹೊರಾಂಗಣದಲ್ಲಿ ಧ್ವಜಸ್ಥಂಭ (ಕೊಡಿಮರ), ಕಲ್ಲುಕುಟ್ಟಿಗ, ಕ್ಷೇತ್ರಪಾಲ, ಅಬ್ಬಗದಾರಗ, ಮುಂಡಂತಾಯ ಪರಿವಾರ ದೈವಗಳ ಗುಡಿಗಳು ಹಾಗೂ ನವದುರ್ಗೆಕಟ್ಟೆ, ಮುಖ ಮಂಟಪಗಳನ್ನು ರಚಿಸಿ ಅಷ್ಠಮಂಗಲ ಪ್ರಶ್ನೆಯಲ್ಲಿ ತಿಳಿಸಿದಂತೆ ಗ್ರಾಮದೇವತೆಯಾದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ಪ್ರಧಾನವಾಗಿಟ್ಟುಕೊಂಡು ಷಢಾಧಾರ ಪ್ರತಿಷ್ಠಾಪನೆ ಮಾಡಲಾಗಿರುತ್ತದೆ. ಶ್ರೀ ಕ್ಷೇತ್ರದ ಭಕ್ತಾಧಿಗಳಾದ ತಾವೆಲ್ಲರೂ ಒಮ್ಮನಸ್ಸಿನಿಂದ ತನುಮನ ಧನ ಸಹಾಯ ನೀಡಿ ಕ್ಷೇತ್ರದ ದೇವಾಲಯದ ನವನಿರ್ಮಾಣ ಮಾಡುವಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಚಿರಸ್ಮರಣೀಯ.

ತಮಗೆಲ್ಲಾ ತಿಳಿದಿರುವಂತೆ ಸಮಗ್ರ ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರದ ಕಾಮಗಾರಿಗಳಾದ ಓಕುಳಿ ಹೊಂಡ, ಓಲಗ ಮಂಟಪ,ಪುಷ್ಕರಣಿ, ರಾಜ ಗೋಪುರ, ಸ್ವಾಗತಗೋಪುರ, ಅಡುಗೆಮನೆ ಸ್ಥಳಾಂತರ ಮತ್ತು ಪುನರ್ ನಿರ್ಮಾಣ, ಉತ್ತರದ ಬದಿಯಲ್ಲಿ ರಸ್ತೆಯ ನಿರ್ಮಾಣ, ಪಂಚ ಪ್ರಾಕಾರದ ಸುತ್ತಲಿನ ಆವರಣ ಸೇರಿದಂತೆ ಕೆಲವು ಕಾಮಗಾರಿಗಳನ್ನು ಮುಂದೆ ಕಾಲಾನುಗುಣವಾಗಿ ಕೈಗೊಳ್ಳಬಹುದು ಎಂದು ತೀರ್ಮಾನಿಸಲಾಗಿತ್ತು.

ನಂತರದಲ್ಲಿ ಎರಡು ಅವಧಿಯ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ಈ ದೇವಳದ ಧಾರ್ಮಿಕ ಕಾರ್ಯಕ್ರಮಗಳು ಸುಸೂತ್ರವಾಗಿ ಜರಗಿಕೊಂಡು ಬಂದಿದ್ದು, ಇದೀಗ ಮೂರನೇ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಅನುಸರಿಸಿಕೊಂಡು ಬರಲಾಗುತ್ತಿದೆ. ನೂತನ ದೇವಾಲಯ ನಿರ್ಮಾಣಗೊಂಡು ೧೩ ವರ್ಷಗಳಾಗುತ್ತಾ ಬಂದು ವಾಡಿಕೆಯಂತೆ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಪುಣ್ಯೋತ್ಸವವನ್ನು ಸಂಪನ್ನಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯವರು ಹಾಗೂ ಭಕ್ತಾಭಿಮಾನಿಗಳು ಕೂಡಿ ಚಿಂತನೆ ನಡೆಸಿ, ಜ್ಯೋತಿಷ್ಯರಾದ, ಎ.ವಿ. ಮಾಧವನ್ ಪೊದುವಾಳ್ ಪಯ್ಯನ್ನೂರು, ಹಾಗೂ ವಾಸ್ತು ತಜ್ಞ ಗುಂಡಿಬೈಲು ಶ್ರೀ ಸುಬ್ರಹ್ಮಣ್ಯ ಭಟ್ಟರ ನೇತೃತ್ವದಲ್ಲಿ ದಿನಾಂಕ :೨೧-೦೬-೨೦೧೯ ರಂದು ದೇವಳದಲ್ಲಿ ಅಷ್ಟ ಮಂಗಳ ಪ್ರಶ್ನೆ ಇರಿಸಿದಾಗ ಶ್ರೀ ಗಣಪತಿ ಸಾನಿಧ್ಯ, ಶ್ರೀ ನಾಗಸಾನಿಧ್ಯ, ಶ್ರೀ ನಂದಿ ಮೂರ್ತಿಯೊಂದು ಭಿನ್ನವಾಗಿರುವುದು, ಮಾರಿಯಮ್ಮ ಸಾನಿಧ್ಯ ಹಾಗೂ ಶ್ರಿ ಬ್ರಹ್ಮಲಿಂಗ ಸಾನಿಧ್ಯಗಳಲ್ಲಿ ಲೋಪದೋಷಗಳಾಗಿದ್ದು ಆ ಕುರಿತ ಪರಿಹಾರಗಳನ್ನು ಪರಿಪೂರ್ಣಗೊಳಿಸುವಂತೆ ಸೂಚಿಸಿರುತ್ತಾರೆ.

ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ವಾಸ್ತು ತಜ್ಞರ ಮಾರ್ಗದರ್ಶನದಲ್ಲಿ ದೇವಸ್ಥಾನದ ವ್ಯಾಪ್ತಿಯಲ್ಲಿರುವ ಮೂರು ಶ್ರೀನಾಗ ಸಾನಿಧ್ಯಗಳ ಸಂಪೂರ್ಣ ಜೀರ್ಣೋದ್ಧಾರವನ್ನು ಆಧ್ಯತೆಯ ಮೇರೆಗೆ ಕೈಗೊಳ್ಳಲಾಯಿತು. ಶ್ರೀಗಣಪತಿ ಸಾನಿಧ್ಯ ವಿಧಿವತ್ತಾಗಿ ಸರಿಪಡಿಸಲಾಗಿರುತ್ತದೆ. ಬಡಾಸಾಲಿಕೇರಿಯ ಮೂಲನಾಗಸಾನಿಧ್ಯದಲ್ಲಿ ಚಿತ್ರಕೂಟ ನವೀಕರಣ, ತೀರ್ಥಬಾವಿ ರಚನೆ, ನಾಗದೇವರು ಹಾಗೂ ಪಂಚದೈವಗಳ ಪುನ: ಪ್ರತಿಷ್ಠೆ, ಕುಂಚಿಬನ ಶ್ರೀ ನಾಗಸಾನಿಧ್ಯದಲ್ಲಿ ಸಾನಿಧ್ಯ ನವೀಕರಣ, ಪುನ: ಪ್ರತಿಷ್ಠೆ ಹಾಗೂ ದೇವಸ್ಥಾನದ ನಾಗಸಾನಿಧ್ಯದಲ್ಲಿ ಚಿತ್ರಕೂಟ ನವೀಕರಣ ಹಾಗೂ ಪುನ: ಪ್ರತಿಷ್ಠೆ ವಿಧಿ ವಿಧಾನಗಳು ಸಂಪನ್ನಗೊಂಡಿವೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಾಭಿಮಾನಿಗಳ ನೆರವು ಹಾಗೂ ದೇವಸ್ಥಾನದ ವತಿಯದ್ದಾದ ನಿಧಿಯಿಂದ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ಸುಮಾರು ೧೩ ಲಕ್ಷಗಳ ಖರ್ಚಿನಲ್ಲಿ ಪೂರ್ಣಗೊಳಿಸಲಾಗಿದೆ. ಈ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳನ್ನು ದೇವಳದ ತಂತ್ರಿಗಳವರು ನೆರವೇರಿಸಿಕೊಟ್ಟಿರುತ್ತಾರೆ.

ಇದೀಗ ಸಾನಿಧ್ಯ ಧಾರ್ಮಿಕ ರೀತ್ಯಾ ಪರಿಪೂರ್ಣತೆಗೆ ಬಾಕಿ ಉಳಿದಿರುವ ಧಾರ್ಮಿಕ ಕಾರ್ಯಕ್ರಮಗಳಾದ, ಭಿನ್ನವಾದ ಶ್ರೀನಂದಿ ಮೂರ್ತಿಯ ನೂತನ ರಚನೆ, ಶ್ರೀ ಬ್ರಹ್ಮಲಿಂಗ ಮೂರ್ತಿಯ ಪ್ರತಿಷ್ಠಾಪನೆ, ಮಾರಿಯಮ್ಮನವರ ಬಿಂಬವನ್ನು ಪರಿವರ್ತಿಸಿ ಭದ್ರಕಾಳಿ ಅಮ್ಮನವರಾಗಿ ಸ್ಥಳಾಂತರಿಸಿ ದೇವಾಲಯದಲ್ಲಿ ಪುನ: ಪ್ರತಿಷ್ಠಾಪಿಸುವುದು,ನೂತನ ವಸಂತ ಮಂಟಪ ರಚನೆ. ಓಕುಳಿ ಹೊಂಡ ರಚನೆಯ ಕೆಲಸಗಳು ಆಗಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ದೇವಳದ ಆಡಳಿತ ಮಂಡಳಿಯವರನ್ನೊಳಗೊಂಡು ಊರ, ಪರವೂರ ಭಕ್ತಾಭಿಮಾನಿಗಳ ಸಕ್ರಿಯವಾದ `ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ' ಸಮಿತಿಯನ್ನು ದಿನಾಂಕ ೧೩-೦೯-೨೦೨೦ರಂದು ರಚಿಸಿ ಕಾರ್ಯೋನ್ಮುಖರಾಗಿರುತ್ತೇವೆ. ಈ ಎಲ್ಲಾ ಜೀರ್ಣೋದ್ಧಾರದ ಧಾರ್ಮಿಕ ಕಾರ್ಯಕ್ರಮಗಳಿಗೆ ಸರಿಸುಮಾರು ೬೦ ಲಕ್ಷಗಳಷ್ಟು ಆರ್ಥಿಕ ನೆರವು ಸಂಗ್ರಹಿಸ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ವಾಸ್ತುತಜ್ಞರಿಂದ ವಿನ್ಯಾಸ ಹಾಗೂ ತಗಲಬಹುದಾದ ವೆಚ್ಚದ ವಿವರ ಕೂಡಾ ತಯಾರಿಸಲಾಗಿದೆ.

ಶ್ರೀಕ್ಷೇತ್ರದ ಬಾಕಿ ಉಳಿದ ಧಾರ್ಮಿಕ ಕಾಮಗಾರಿಗಳ ನಿರ್ಮಾಣ ಹಾಗೂ ಮುಂದೆ ಜರುಗುವ ಬ್ರಹ್ಮಕಲಶಾಭಿಷೇಕ ಪುಣ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮಗಳಿಗೆ ಭಕ್ತಾಧಿಗಳಾದ ತಾವೆಲ್ಲರೂ ಭಕ್ತಿಪೂರ್ವಕವಾಗಿ, ತನು ಮನ ಧನ ಸಹಕಾರ ನೀಡಿ ಭವ್ಯ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಕೆನರಾ ಬ್ಯಾಂಕ್ ಬ್ರಹ್ಮಾವರ, ಚಾಂತಾರು ಶಾಖೆಯಲ್ಲಿನ ಜೀರ್ಣೋದ್ದಾರ ಮತ್ತು ಬ್ರಹ್ಮಕಲೋಶೋತ್ಸವ ಸಮಿತಿಯ ಉಳಿತಾಯ ಖಾತೆ ಸಂಖ್ಯೆ 01122010001600 IFSC CNRB0010112

                                    ಗಿರಿರಾಜ ಕುಮಾರಿ ಕಾಂ ಭವಾನೀಂ ಶರಣಾಗತ ಪಾಲನೈಕ ದಕ್ಷಾಂ|
                                    ವರದಾಭಯ ಚಕ್ರ ಶಂಖ ಹಸ್ತಾಂ, ವರದಾತ್ರೀಂ ಭಜತಾಂ ಸ್ಮರಾಮಿ ನಿತ್ಯಮ್||